ಏಕಸ್ವ(ಪೇಟೆಂಟ್ ): ಒಂದು ಉತ್ಪನ್ನವನ್ನೋ ಪದಾರ್ಥವನ್ನೋ ಮಾರಾಟಮಾಡಲು ಸರ್ಕಾರ ನೀಡಿದ ವಿಶಿಷ್ಟ ಹಕ್ಕು. ಸಮಸ್ತರ ಅವಗಾಹನೆಗೆ ಅವಕಾಶವಿರುವಂತೆ ತೆರೆದಿಟ್ಟ ಅಥವಾ ಬಹಿರಂಗ ಪತ್ರ ಎಂದು ಹೇಳಬಹುದಾದ ಲೆಟರ್ಸ್‌ ಪೇಟೆಂಟ್ ಎಂಬುದರಿಂದ ಸ್ಥೂಲವಾಗಿ ಈ ಅರ್ಥದಲ್ಲಿ ಬಳಕೆಗೆ ಬಂದ ಪೇಟೆಂಟ್ ಶಬ್ದಕ್ಕೆ ಕನ್ನಡದಲ್ಲಿ ಬಳಸಲಾಗಿರುವ ಸಮಾನಾರ್ಥಕ ಶಬ್ದ. ಪ್ರಶಸ್ತಿ ಪ್ರಧಾನ, ಅಧಿಕಾರಿಗಳ ನೇಮಕ, ಸಂಘ ಸ್ಥಾಪನೆಯ ಸನ್ನದಿನ ನೀಡಿಕೆ, ಹೊಸ ಆವಿಷ್ಕಾರಗಳ ತಯಾರಿಕೆ ಬಳಕೆ ಅನುಭವ ಮಾರಾಟಗಳ ಹಕ್ಕಿನ ಕೊಡುಗೆ -ಇವೆಲ್ಲವೂ ಲೆಟರ್ಸ್‌ ಪೇಟೆಂಟ್ ಎಂಬ ಬಹಿರಂಗ ಪತ್ರಗಳ ಮುಖೇನವೇ ಆಗುತ್ತಿದ್ದುವಾದರೂ ಇಂಗ್ಲಿಷಿನ ಪೇಟೆಂಟ್ ಎಂಬ ಶಬ್ದ ಇವುಗಳ ಪೈಕಿ ಕೊನೆಯದಕ್ಕೆ ಮಾತ್ರ ಸಾಮಾನ್ಯವಾಗಿ ಅನ್ವಯವಾಗುತ್ತದೆ. ವಾಣಿಜ್ಯ ಕ್ಷೇತ್ರದಲ್ಲಿ ಯಾರಿಗೇ ಆಗಲಿ ಏಕಸ್ವಾಮ್ಯದ ಸಂಪುರ್ಣ ಹಾಗೂ ನಿರವಧಿ ಹಕ್ಕುಗಳನ್ನು ನೀಡುವುದು ಈಚೆಗೆ ಸರ್ಕಾರಗಳ ನೀತಿಯಾಗಿರುವುದಿಲ್ಲವಾದ್ದರಿಂದ ಈ ಬಗೆಯ ಪ್ರದಾನ ಈಗ ಸಾಮಾನ್ಯವಾಗಿ ಯಾವುದಾದರೊಂದು ಆವಿಷ್ಕಾರದ (ಇನ್ವೆನ್ಷನ್) ಅಥವಾ ಪರಿಶೋಧನೆಯ (ಡಿಸ್ಕವರಿ) ಫಲವಾದ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರುತ್ತದೆ; ಒಂದು ಕ್ಲುಪ್ತವಾದ ಅವಧಿಗೆ ಮಾತ್ರ ಇದನ್ನು ಕೊಡ ಮಾಡಲಾಗುತ್ತದೆ. ವಿಜ್ಞಾನ ಮತ್ತು ಉಪಯುಕ್ತ ಕಲೆಗಳಲ್ಲಿ ಹೊಸ ಹೊಸ ಸಂಶೋಧನೆ ಪ್ರಯೋಗಗಳು ನಡೆಯುವಂತೆ ಉತ್ತೇಜನ ನೀಡುವ ಉದ್ದೇಶದಿಂದ ಈ ಬಗೆಯ ಮಿತವ್ಯಾಪ್ತಿಯ ಹಾಗೂ ಮಿತ ಅವಧಿಯ ಏಕಸ್ವ ಹಕ್ಕುಗಳನ್ನು ಕೊಡಲಾಗುತ್ತಿದೆ.

 ಬ್ರಿಟನ್ನಿನಲ್ಲಿ 
ಹೊಸ ಉಪಯುಕ್ತ ಆವಿಷ್ಕಾರಗಳ ತಯಾರಿಕೆ ಬಳಕೆ ಮತ್ತು ಮಾರಾಟಗಳ ಬಗ್ಗೆ ಆವಿಷ್ಕರ್ತರಿಗೆ (ಇನ್ವೆಂಟರ್ಸ್‌) ಒಂದು ಕ್ಲುಪ್ತ ಅವಧಿಗೆ ಸಂಪುರ್ಣ ಹಕ್ಕು ನೀಡುವ ಅಧಿಕಾರ ಇಂಗ್ಲೆಂಡಿನ ದೊರೆಗೆ ಬಲು ಹಿಂದಿನಿಂದಲೂ ಇತ್ತು. ಆದರೆ ಸಂಪ್ರದಾಯ ನ್ಯಾಯ ಇದಕ್ಕೆ ಖಚಿತವೂ ಸ್ಪಷ್ಟವೂ ಆದ ಕೆಲವು ಇತಿಮಿತಿಗಳನ್ನು ವಿಧಿಸಿತ್ತು. ಸಾಮಾನ್ಯ ಬಳಕೆಯ ವಸ್ತುಗಳ ಮಾರಾಟದ ಸಂಪುರ್ಣ ಹಕ್ಕು ನೀಡುವ ಅಧಿಕಾರ ದೊರೆಗೆ ಇರಲಿಲ್ಲ. ಸರ್ವಮಾನ್ಯವಾದ ಕಸಬೊಂದರ ಬಗ್ಗೆ ಯಾರೊಬ್ಬರಿಗೂ ಸಂಪುರ್ಣ ಹಕ್ಕು ನೀಡುವಂತಿರಲಿಲ್ಲ. 

ಹಕ್ಕು ಪಡೆದಾತನೇ ಆವಿಷ್ಕರ್ತನಾಗಿಲ್ಲದಿದ್ದರೂ ಆ ಆವಿಷ್ಕಾರವನ್ನು ದೇಶದಲ್ಲಿ ಅವನೇ ಚಾಲ್ತಿಗೆ ತಂದವನಾದರೂ ಆಗಿರಬೇಕು. ಇತರರಿಗೆ ಅದು ವೇದ್ಯವಾಗುವುದಕ್ಕೆ ಅಗತ್ಯವಾಗುವಷ್ಟು ಅವಧಿಗೆ ಮಾತ್ರ ಈ ಹಕ್ಕು ನೀಡತಕ್ಕದ್ದು. ಈ ಏಕಸ್ವದ ಕೊಡುಗೆಗೆ ಕಾರಣವಾದ ವಸ್ತುವಿನಿಂದ ಹೊಸ ವ್ಯಾಪಾರ ಅಥವಾ ತಯಾರಿಕೆಯಾಗುವಂತಿರಬೇಕು. ಏಕಸ್ವ ನೀಡಲಾದ ಆವಿಷ್ಕಾರದಲ್ಲಿ ಉಪಯುಕ್ತತೆ ಮತ್ತು ಹೊಸತನಗಳಿರಬೇಕು. ಇದರಿಂದ ವ್ಯಾಪಾರಕ್ಕೆ ಅನನುಕೂಲವಾಗಲಿ ಧಕ್ಕೆಯಾಗಲಿ ಒದಗಬಾರದು. ಇವು ಸಂಪ್ರದಾಯನ್ಯಾಯದ ಪ್ರಕಾರ ವಿಧಿಸಲಾಗುತ್ತಿದ್ದ ಕೆಲವು ಷರತ್ತುಗಳು.

ಒಂದನೆಯ ಎಲಿಜ಼ಬೆತ್ ಮತ್ತು ಒಂದನೆಯ ಜೇಮ್ಸರ ಕಾಲದಲ್ಲಿ ಏಕಸ್ವವನ್ನು ಕುರಿತ ಸಂಪ್ರದಾಯ ನ್ಯಾಯವನ್ನು ಮೂಲೆಗೊತ್ತಲಾಯಿತು. ದೇಶ ಹಿತಾರ್ಥವಾಗಿ ಹಾಗೂ ವ್ಯಾಪಾರಾಭಿವೃದ್ಧಿಗಾಗಿ ಏಕಸ್ವಗಳನ್ನು ನೀಡಬಹುದೆಂಬ ನಿಯಮವನ್ನು ಮುಂದಿಟ್ಟು ಅನೇಕ ಆವಶ್ಯ ವಸ್ತುಗಳ ವ್ಯಾಪಾರದಲ್ಲಿ ಏಕಸ್ವ ನೀಡಲಾಯಿತು. ಇದನ್ನು ವಿರೋಧಿಸಿ ತೀವ್ರ ಚಳವಳಿ ಹೂಡಿದ ಮೇಲೆ ಕೊನೆಗೂ ಈ ಬಗೆಯ ನ್ಯಾಯಬಾಹಿರ ಏಕಸ್ವಾಮ್ಯ ತೆರವಾಯಿತು. ಇದಕ್ಕಾಗಿ 1624ರಲ್ಲಿ ಜಾರಿಗೆ ಬಂದ ಕಾಯಿದೆ ಬಲು ಮುಖ್ಯವಾದ್ದು. ಒಂದು ಹೊಸ ತಯಾರಿಕೆಗೆ ಸಂಬಂಧಿಸಿದಂತೆ ಅದರ ಪ್ರಥಮ ಆವಿಷ್ಕರ್ತನಿಗೆ (ಅಥವಾ ಆವಿಷ್ಕರ್ತರಿಗೆ) 14 ವರ್ಷಗಳಿಗೆ ಮೀರದಂತೆ ಸಂಪುರ್ಣ ಹಕ್ಕು ನೀಡಬಹುದೆಂದೂ ಆದರೆ ಬೆಲೆ ಏರಿಸುವ, ವ್ಯಾಪಾರ ಕುಂಠಿಸುವ ಅಥವಾ ದುಷ್ಪರಿಣಾಮವಾಗುವ ಯಾವ ಬಗೆಯ ಹಕ್ಕುಗಳನ್ನೂ ನೀಡಬಾರದೆಂದೂ ವಿಧಿಸಲಾಯಿತು. ಇಂಗ್ಲಿಷ್ ಏಕಸ್ವ ಪದ್ಧತಿಗೆ ಇದೇ ಮೂಲಾಧಾರ. ಮುಂದೆ ಈ ಅವಧಿಯನ್ನು 14 ರಿಂದ 16 ವರ್ಷಗಳಿಗೆ ಏರಿಸಲಾಯಿತು. (1919).

 ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 
ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಪ್ರಥಮ ಏಕಸ್ವ ಕಾಯಿದೆ ಜಾರಿಗೆ ಬಂದದ್ದು 1790ರಲ್ಲಿ. ಇದರ ಪ್ರಕಾರ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅದುವರೆಗೂ ಗೊತ್ತಿಲ್ಲದ ಅಥವಾ ಬಳಸಲಾಗಿಲ್ಲದ ಯಾವುದೇ ಆವಿಷ್ಕಾರದ ನಿಜವಾದ ಕರ್ತನಿಗೆ 14 ವರ್ಷಗಳ ಅವಧಿಯ ಏಕಸ್ವ ಕೊಡಬಹುದಾಗಿತ್ತು. 1793ರಲ್ಲಿ ಇನ್ನೊಂದು ಕಾಯಿದೆ ಜಾರಿಗೆ ಬಂತು. ಇಂದು ಜಾರಿಯಲ್ಲಿರುವ ಏಕಸ್ವ ನ್ಯಾಯಕ್ಕೆ 1836ರ ಕಾಯಿದೆಯೇ ಆಧಾರ. ಇದು 1870ರ ಕಾಯಿದೆಯಿಂದ ವಿಸ್ತೃತಗೊಂಡಿತು. ಅಲ್ಲಿಂದೀಚೆಗೆ ಇದಕ್ಕೆ ಪದೇ ಪದೇ ತಿದ್ದುಪಡಿಗಳಾಗಿವೆ. ಏಕಸ್ವಗಳಿಗೂ ಕೈಗಾರಿಕೆಗೂ ಇರುವ ಸಂಬಂಧವನ್ನೂ ಕೈಗಾರಿಕೆಯ ಹಿತದೃಷ್ಟಿಯಿಂದ ಎಷ್ಟರಮಟ್ಟಿಗೆ ಇವು ಸೂಕ್ತವೆಂಬುದನ್ನೂ ಪರಿಶೀಲಿಸಲಾಗುತ್ತಿದೆ. ಪರಿಷ್ಕರ್ತನಿಗೆ ನೀಡಲಾಗುವ ಏಕಸ್ವದ ಅವಧಿ 17 ವರ್ಷ. ಸಸ್ಯಗಳ ಹೊಸ ತಳಿಗಳ ಪರಿಶೋಧನೆ ಮತ್ತು ಆವರ್ತನೆಗಳಿಗೆ ಏಕಸ್ವ ಪಡೆಯಲು 1930ರಲ್ಲಿ ಅವಕಾಶ ನೀಡಲಾಯಿತು.

 ಭಾರತದಲ್ಲಿ 
ಭಾರತ ಸರ್ಕಾರ 1970ರಲ್ಲಿ ಏಕಸ್ವಗಳ ಮತ್ತು ನಕ್ಷೆಗಳ ಕಾಯಿದೆ 1911ನ್ನು(ದಿ ಪೇಟೆಂಟ್ಸ್‌ ಅಂಡ್ ಡಿಸೈನ್ಸ್‌ ಆಕ್ಟ್‌) ಜಾರಿಗೆ ತಂದಿತು. ಏಕಸ್ವಕ್ಕೆ ಸಂಬಂಧಪಟ್ಟ ವಿಚಾರಗಳನ್ನು ವ್ಯವಸ್ಥೆಯಿಂದ ನಡೆಸಲು ಏಕಸ್ವ ಕಚೇರಿಯನ್ನು ನಿರ್ಮಿಸಿದೆ. ಇದಕ್ಕೆ ಒಬ್ಬ ಮುಖ್ಯಾಧಿಕಾರಿ-ನಿಯಂತ್ರಿಕ (ಕಂಟ್ರೋಲರ್)-ಇರುತ್ತಾನೆ.

ಏಕಸ್ವ ಪಡೆಯುವ ಕ್ರಮ: ಏಕಸ್ವವನ್ನು ಪಡೆಯಲು ಇಚ್ಛಿಸುವಾತ (ಅಥವಾ ಇಂಥ ಹಲವರು) ಏಕಸ್ವ ಕಚೇರಿಗೆ ನಿರ್ದಿಷ್ಟ ನಮೂನೆಯಲ್ಲಿ (ಫಾರ್ಮ್) ಅರ್ಜಿ ಬರೆದುಕೊಳ್ಳಬೇಕು. ಅರ್ಜಿದಾರ ಭಾರತೀಯ ಪ್ರಜೆಯೇ ಆಗಬೇಕೆಂದಿಲ್ಲ. ನವೀನ ಆವಿಷ್ಕಾರದ (ಶೋಧನೆಯ) ಸ್ವಾಧೀನ ಪಡೆದಿರುವುದಾಗಿ ಅಭ್ಯರ್ಥಿ ತನ್ನ ಅರ್ಜಿಯಲ್ಲಿ ನಿರೂಪಿಸಬೇಕು. ಅಭ್ಯರ್ಥಿ-ಅಥವಾ ಅಭ್ಯರ್ಥಿಗಳಲ್ಲಿ ಒಬ್ಬ-ಪರಿಷ್ಕರ್ತನಾಗಿರಬೇಕು; ಅಥವಾ ಪರಿಷ್ಕಾರದ ಒಡೆಯನೋ ಅದನ್ನು ಬೇರೆಯವರಿಂದ ಪಡೆದವನೋ ಆಗಿರಬೇಕು. ಅರ್ಜಿಯೊಂದಿಗೆ ಶೋಧನೆಯ ರೂಪುರೇಷೆಗಳನ್ನು ಒಳಗೊಂಡ ತಾತ್ಕಾಲಿಕ ಅಥವಾ ಪರಿಪುರ್ಣ ವಿವರಣೆ ಕೊಡಬೇಕು. ಅಭ್ಯರ್ಥಿಗಳಲ್ಲಿ ಯಾರೂ ಆವಿಷ್ಕರ್ತರಾಗಿರದಿದ್ದರೆ ಆವಿಷ್ಕರ್ತನ ವಿವರಗಳನ್ನು ಕೊಟ್ಟು ಆ ಹಕ್ಕು ತಮಗೆ ಯಾವ ರೀತಿ ಬಂತೆಂದು ನಿರೂಪಿಸಬೇಕು. ವಿವರಣೆ ಪತ್ರ ಅತಿಮುಖ್ಯ ದಾಖಲೆ. ಆವಿಷ್ಕಾರ ಯಾವ ರೀತಿಯದು ಎಂಬುದು ಸುಸ್ಪಷ್ಟವಾಗಿ ಅದರಿಂದ ತಿಳಿಯುವಂತಿರಬೇಕು. ಅದನ್ನು ಅಲ್ಲಿ ಹೆಸರಿಸಬೇಕು. ಆವಿಷ್ಕಾರ ಯಾವ ಬಗೆಯದು, ಅದನ್ನು ಕಾರ್ಯಗತಗೊಳಿಸುವ ಕ್ರಮ ಯಾವುದು-ಮುಂತಾದ ಅಂಶಗಳು ಪರಿಪುರ್ಣ ವಿವರಣಪತ್ರದಲ್ಲಿ ಇರುವುದು ಆವಶ್ಯ, ಆವಿಷ್ಕಾರವನ್ನು ಕುರಿತ ಹೆಚ್ಚಿನ ವಿವರ ಆವಶ್ಯವೆಂದು ನಿಯಂತ್ರಕನಿಗೆ ಎನಿಸಿದರೆ ಆತ ಆ ಬಗ್ಗೆ ಆದೇಶ ನೀಡಬಹುದು. ತಾತ್ಕಾಲಿಕ ವಿವರಣ ಪತ್ರ ಸಲ್ಲಿಸಿದ್ದ ಪಕ್ಷದಲ್ಲಿ ಮುಂದಿನ ಒಂಬತ್ತು ತಿಂಗಳೊಳಗೆ ಪರಿಪುರ್ಣ ಪತ್ರ ಸಲ್ಲಿಸತಕ್ಕದ್ದು. ಈ ಅವಧಿಯನ್ನು ಮತ್ತೆ ಹತ್ತು ತಿಂಗಳಿಗೆ ವಿಸ್ತರಿಸಬಹುದು. ಇಷ್ಟರೊಳಗೂ ಸಂಪುರ್ಣ ವಿವರಣ ಪತ್ರ ಬಾರದಿದ್ದಲ್ಲಿ ಅಭ್ಯರ್ಥಿಗಳು ಅದನ್ನು ಬಿಟ್ಟಂತೆ ಲೆಕ್ಕ.

ನಿಯಮಿತ ಕಾಲದೊಳಗೆ ಪರಿಪುರ್ಣ ವಿವರಣ ಪತ್ರವೇ ಮುಂತಾದವು ಬಂದಲ್ಲಿ ಅರ್ಜಿ ಕಾನೂನುಬದ್ಧವಾಗಿದೆಯೆ ಎಂಬ ಎಲ್ಲ ವಿಚಾರಗಳನ್ನು ವಿಮರ್ಶಿಸಲು ನಿಯಂತ್ರಕ ಈ ಪತ್ರಗಳನ್ನು ಪರೀಕ್ಷಕನಿಗೆ (ಎಗ್ಸಾಮಿನರ್) ಕಳುಹಿಸುತ್ತಾನೆ. ಈ ವಿಚಾರದಲ್ಲಿ ಆತನಿಂದ ಬಂದ ವರದಿಯ ಆಧಾರದ ಮೇಲೆ ನಿಯಂತ್ರಕ ತೀರ್ಮಾನ ಕೈಗೊಳ್ಳುತ್ತಾನೆ. ಆತ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಬಹುದು; ಅಥವಾ ನಕ್ಷೆಯ ವಿವರಣೆಗಳಲ್ಲಿ ತಿದ್ದುಪಡಿ ಮಾಡುವಂತೆ ಆದೇಶಿಸಬಹುದು. ಅರ್ಜಿಯಲ್ಲಿ ಒಂದು ಶೋಧನೆಗಿಂತ ಹೆಚ್ಚಿನ ಶೋಧನೆಗಳು ಅಡಕವಾಗಿದ್ದಲ್ಲಿ ಇವಕ್ಕೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕೆಂದು ನಿರ್ದೇಶಿಸಬಹುದು.

ಹದಿನೆಂಟು ತಿಂಗಳ ಒಳಗೆ ಅರ್ಜಿಯ ಸ್ವೀಕಾರ ಪ್ರಕಟವಾಗಬೇಕು. ಇಲ್ಲದಿದ್ದಲ್ಲಿ ಅದು ಅಸ್ವೀಕೃತವಾಯಿತೆಂದು ಅರ್ಥ. ಇದರ ಬಗ್ಗೆ ಆಕ್ಷೇಪಣೆಯೇನಾದರು ಇದ್ದರೆ ಅದನ್ನು ಅರ್ಜಿ ಸ್ವೀಕೃತವಾಯಿತೆಂದು ಪ್ರಕಟವಾದ ನಾಲ್ಕು ತಿಂಗಳ ಒಳಗೆ ಕಚೇರಿಗೆ ತಿಳಿಸಬೇಕು. ಅರ್ಜಿದಾರ ತನ್ನಿಂದಲೋ ತಾನು ಯಾರ ಪ್ರತಿನಿಧಿಯೋ ಅವನಿಂದಲೋ ಅಥವಾ ತನಗೆ ಆ ಹಕ್ಕನ್ನು ವರ್ಗಾಯಿಸಿದವರಿಂದಲೋ ಇದನ್ನು ಪಡೆದಿದ್ದಾನೆಂದು ಕಕ್ಷಿಯ ಆಕ್ಷೇಪವಿರಬಹುದು. ಇದಕ್ಕೆ ಮುಂಚೆಯೆ ಹಾಕಿದ ಅರ್ಜಿಯಲ್ಲಿ ನಮೂದಿಸಿರುವ ವಿವರಗಳನ್ನೇ ಇದೂ ಒಳಗೊಂಡಿದೆಯೆಂದೂ ಆದ್ದರಿಂದ ಇದಕ್ಕೆ ಏಕಸ್ವ ಕೊಡಲಾಗದೆಂದೂ ತಕರಾರು ಹೂಡಬಹುದು; ಅಥವಾ ಈ ಅರ್ಜಿಯಲ್ಲಿ ಕಾಣಿಸಿರುವ ಆವಿಷ್ಕಾರ ಭಾರತದಲ್ಲಿ ಆಗಲೇ ಬಳಕೆಯಲ್ಲಿತ್ತೆಂದೂ ಇದರ ಉಪಯೋಗ ಮೊದಲೇ ತಿಳಿದಿತ್ತೆಂದೂ ವಾದಿಸಬಹುದು. ಇಂಥ ಆಕ್ಷೇಪಣೆಯನ್ನು ವಿಚಾರಿಸಿ ಸೂಕ್ತ ತೀರ್ಪು ನೀಡುವುದು ನಿಯಂತ್ರಕನ ಕರ್ತವ್ಯ.
ಯಾರ ಆಕ್ಷೇಪಣೆಯೂ ಇರದಿದ್ದರೆ ಅಥವಾ ಆಕ್ಷೇಪಣೆಯನ್ನು ತಳ್ಳಿಹಾಕಿದರೆ ಸರ್ಕಾರ ಸೂಚಿಸಿದ ಸೂಕ್ತ ಷರತ್ತುಗಳಿಗೆ ಒಳಪಡಿಸಿ ಏಕಸ್ವ ಕಚೇರಿ ತನ್ನ ಮೊಹರು ನಿಶಿ ಅರ್ಜಿದಾರನಿಗೆ ಅಥವಾ ಅರ್ಜಿದಾರರಿಗೆ ಏಕಸ್ವ ನೀಡುತ್ತದೆ. ಈ ಏಕಸ್ವವನ್ನು ಪಡೆದವರಿಗೆ ಇದರಲ್ಲಿ ನಮೂದಿಸಿದ ಹೊಸ ಆವಿಷ್ಕಾರದ ಪ್ರಕಾರ ವಸ್ತುವನ್ನು ಭಾರತದಲ್ಲಿ ತಯಾರಿಸಲು, ಅದನ್ನು ಉಪಯೋಗಿಸಲು ಮತ್ತು ಅದನ್ನು ಮಾರಲು ಮಾತ್ರವಲ್ಲದೆ ಈ ಅಧಿಕಾರವನ್ನು ಇನ್ನೊಬ್ಬರಿಗೆ ವರ್ಗಾಯಿಸಲೂ ಹಕ್ಕು ಬರುತ್ತದೆ. ಸಾಮಾನ್ಯವಾಗಿ ಏಕಸ್ವವನ್ನು ಅರ್ಜಿಯ ತಾರೀಖಿನಿಂದ ಇಪ್ಪತ್ನಾಲ್ಕು ತಿಂಗಳುಗಳ ಒಳಗೆ ಕೊಡಬೇಕು. ನಿಯಂತ್ರಕ ಕೊಟ್ಟ ತೀರ್ಪಿನಿಂದಲೋ ತಕರಾರು ಅರ್ಜಿಯನ್ನು ತಳ್ಳಿ ಹಾಕಿದ್ದೇ ಮುಂತಾದ್ದರಿಂದಲೋ ತೊಂದರೆಗೆ ಒಳಗಾದವನು ಕೇಂದ್ರ ಸರ್ಕಾರಕ್ಕೆ ಅಪೀಲು ಮಾಡಲು ಶಾಸನದಲ್ಲಿ ಅವಕಾಶವುಂಟು.

 ರಕ್ಷಣೆ 
ಏಕಸ್ವ ನೀಡುವ ವಿಚಾರದ ತೀರ್ಮಾನಕ್ಕೆ ಯಾವ ಬಾಧಕವೂ ಬಾರದ ರೀತಿಯಲ್ಲಿ ಅರ್ಜಿಯ ತಾರೀಖಿನಿಂದ ಏಕಸ್ವ ನೀಡುವ ತಾರೀಖಿನವರೆಗೆ ಸಂಬಂಧಪಟ್ಟ ವಸ್ತುವನ್ನು ಉಪಯೋಗಿಸಲೂ ಅದರ ಬಗ್ಗೆ ಪ್ರಚಾರ ಮಾಡಲೂ ಅರ್ಜಿದಾರರಿಗೆ ಹಕ್ಕುಂಟು. ಇದನ್ನು ತಾತ್ಕಾಲಿಕ ರಕ್ಷಣೆಯೆಂದು ಕರೆಯಲಾಗುತ್ತದೆ.

ಏಕಸ್ವದ ಅವಧಿ ಅದರಲ್ಲಿ ಹಾಕಿದ ತಾರೀಖಿನಿಂದ ಹದಿನಾರು ವರ್ಷ. ಅವಧಿ ಮುಗಿಯುವುದಕ್ಕೆ ಆರು ತಿಂಗಳ ಮುನ್ನ ಈ ಅವಧಿಯನ್ನು ಮುಂದುವರಿಸಲು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು. ಆ ವಿಚಾರದಲ್ಲಿ ಬಹಿರಂಗವಾದ ಪ್ರಕಟಣೆಯನ್ನು ನಿರ್ದಿಷ್ಟ ಕ್ರಮದಲ್ಲಿ ಕೊಡಬೇಕು. ಅದಕ್ಕೆ ಯಾರಾದರೂ ಆಕ್ಷೇಪಣೆ ಸಲ್ಲಿಸುವುದಿದ್ದರೆ ನಿರ್ದಿಷ್ಟ ಸಮಯದ ಒಳಗೆ ಅದನ್ನು ಸಲ್ಲಿಸಬಹುದು. ಅವಧಿ ಮುಂದುವರಿಸಲು ಮಾಡಿದ ಅರ್ಜಿಯನ್ನು ಕೇಂದ್ರ ಸರ್ಕಾರ ತಾನೇ ಪರಾಮರ್ಶೆ ಮಾಡಿ ನಿರ್ಧರಿಸಬಹುದು. ಅಗತ್ಯ ಕಂಡಲ್ಲಿ ಉಚ್ಚನ್ಯಾಯಾಲಯಕ್ಕೆ ತೀರ್ಮಾನಕ್ಕೆ ಕಳುಹಿಸಬಹುದು. ನಿಯಂತ್ರಕನೂ ಆಕ್ಷೇಪಣೆ ಕೊಟ್ಟವನೂ ಈ ವ್ಯಾಜ್ಯದ ಪಕ್ಷಗಳೆಂದು (ಪಾರ್ಟಿ) ಉಚ್ಚನ್ಯಾಯಾಲಯದಲ್ಲಿ ತಿಳಿಯಲಾಗುತ್ತದೆ. ಕೊಟ್ಟ ಏಕಸ್ವದಿಂದ ಸರಿಯಾದ ಉತ್ಪತ್ತಿ ದೊರಕಿಲ್ಲವಾದರೆ ಕೇಂದ್ರ ಸರ್ಕಾರ ಅಥವಾ ಉಚ್ಚನ್ಯಾಯಾಲಯ ಏಕಸ್ವವನ್ನು ಐದು ವರ್ಷ (ವಿಶೇಷ ಸಂದರ್ಭದಲ್ಲಿ ಹತ್ತು ವರ್ಷಗಳ ಕಾಲ) ಮುಂದುವರಿಸಬಹುದು.
ಏಕಸ್ವಕ್ಕೆ ಮೋಸದ ಅರ್ಜಿ: ಯಾರಾದರೂ ಸುಳ್ಳು ಅರ್ಜಿ ನೀಡಿ ಏಕಸ್ವ ಪಡೆದಿದ್ದರೆ ಅದರಿಂದ ಮೊತ್ತ ಮೊದಲಿನ ಆವಿಷ್ಕರ್ತನಿಗೆ ಅಥವಾ ಅವನ ವಾರಸುದಾರ ಅಥವಾ ಅವನಿಂದ ಆವಿಷ್ಕಾರವನ್ನು ಪಡೆದವನಿಗೆ ಯಾವ ಬಗೆಯ ಧಕ್ಕೆಯೂ ಒದಗದೆಂದು ಕಾಯಿದೆ ಸ್ಪಷ್ಟಪಡಿಸುತ್ತದೆ. ಮೋಸದ ಅರ್ಜಿಯಿಂದ ಪಡೆದ ರಕ್ಷಣೆಯಿಂದ ಮೊತ್ತ ಮೊದಲಿನ ಆವಿಷ್ಕರ್ತನ ಹಕ್ಕಿಗೆ ಯಾವ ಕುಂದೂ ಉಂಟಾಗುವುದಿಲ್ಲ.

ಅರ್ಜಿದಾರರು ಪ್ರಥಮ ಆವಿಷ್ಕರ್ತರಲ್ಲವೆಂಬ ಕಾರಣದಿಂದ ಏಕಸ್ವವನ್ನು ಉಚ್ಛನ್ಯಾಯಾಲಯ ರದ್ದು ಮಾಡಿದರೆ ಅಥವಾ ಅದೇ ಕಾರಣಕ್ಕಾಗಿ ಆಕ್ಷೇಪಣೆ ಅರ್ಜಿಯನ್ನು ನಿಯಂತ್ರಕ ಎತ್ತಿ ಹಿಡಿದಲ್ಲಿ ಕಾಯಿದೆಯ ಪ್ರಕಾರ ಮೊದಲಿನ ಆವಿಷ್ಕರ್ತ ಅರ್ಜಿ ಬರೆದುಕೊಂಡರೆ ಆತನಿಗೆ ಏಕಸ್ವ ನೀಡಬಹುದು.

ಏಕಸ್ವ ಪಡೆದವರ ಹೆಸರು, ಏಕಸ್ವದ ವಿವರ, ಅದರ ವರ್ಗಾವಣೆ, ಏಕಸ್ವದ ಉಪಯೋಗಕ್ಕೆ ಕೊಟ್ಟ ಪರವಾನಿಗೆ (ಲೈಸೆನ್ಸ್‌), ಏಕಸ್ವದ ಸನ್ನದಿಗೆ ಮಾಡಿದ ತಿದ್ದುಪಡಿ ಮುಂತಾದವುಗಳನ್ನು ತೋರಿಸುವ ರಿಜಿಸ್ಟರನ್ನು ಏಕಸ್ವದ ಕಚೇರಿಯಲ್ಲಿ ಇಟ್ಟಿರಬೇಕು. ಇದರಲ್ಲಿ ಬರೆಯಬೇಕೆಂದು ವಿಧಿಸಲಾಗಿರುವ ಎಲ್ಲಾ ವಿಚಾರಗಳಲ್ಲೂ ಇದು ಆಪಾತತಃ (ಪ್ರೈಮ ಫೇಷಿಯೀ) ದಾಖಲೆ.
ಕಾಯಿದೆಯ ಪ್ರಕಾರ ಕೊಟ್ಟ ಹಕ್ಕುಗಳ ಹೊರತು ಸರ್ಕಾರಕ್ಕೆ ಏಕಸ್ವ ಹಕ್ಕಿಗೆ ಚ್ಯುತಿ ತರುವ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಅರ್ಜಿದಾರನಿಗೆ ಅಥವಾ ಏಕಸ್ವದಾರನಿಗೆ ಜಾಹೀರು ಮಾಡಿ ಸರ್ಕಾರದ ಕೆಲಸಕ್ಕಾಗಿ ಏಕಸ್ವದ ಆವಿಷ್ಕಾರವನ್ನು ಉಪಯೋಗಿಸುವ ಹಕ್ಕು  ಸರ್ಕಾರದ ಯಾವುದೇ ಇಲಾಖೆಯ ಅಧಿಕಾರಿಗೆ ಇದೆ. ಯುದ್ಧಕ್ಕೆ ಸಂಬಂಧಪಟ್ಟ ಆವಿಷ್ಕಾರಗಳನ್ನು ಆವಿಷ್ಕರ್ತ ಸರ್ಕಾರಕ್ಕೆ ಬಿಟ್ಟು ಕೊಡಬಹುದು. 

 ಪರವಾನೆ 
 ಏಕಸ್ವಸನ್ನದನ್ನು ಮೊಹರು ಮಾಡಿದ ಮೂರು ವರ್ಷಗಳ ಬಳಿಕ ಕಾಯಿದೆಯಲ್ಲಿ ನಮೂದಿಸಿರುವ ಕಾರಣಗಳಿಗಾಗಿ ಬೇರೆ ಯಾರಾದರೂ ಅದರ ಉಪಯೋಗವೇ ಮುಂತಾದವುಗಳ ಬಗ್ಗೆ ಪರವಾನೆ ಬಯಸಿ ಕೇಳಬಹುದು. ಇದು ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡಿದ ಏರ್ಪಾಡು. ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಹಕ್ಕಿನ ಪರವಾನೆಯನ್ನು ಭಾರತದ ವಾಣಿಜ್ಯ ಬೆಳೆವಣಿಗೆಯ ದೃಷ್ಟಿಯಿಂದ ಕೇಳಬಹುದು. ಇಂಥ ಅರ್ಜಿಗಳಿಗೆ ಇರಬೇಕಾದ ಕಾರಣಗಳು, ಅರ್ಜಿಗಳನ್ನು ತೀರ್ಮಾನ ಮಾಡುವ  ವಿಧಾನ, ಇದಕ್ಕಾಗಿ ಕೊಡತಕ್ಕ ಪರಿಹಾರ, ಅಪೀಲು ಇತ್ಯಾದಿಗಳ ಬಗ್ಗೆ ಕಾಯಿದೆಯಲ್ಲಿ ಸೂಕ್ತ ವಿಧಿಗಳನ್ನು ನಿರ್ಮಿಸಲಾಗಿದೆ.

ಏಕಸ್ವವನ್ನು ಬಿಟ್ಟುಕೊಡುವುದಾಗಿ ಅದರ ಹಕ್ಕುದಾರ ಇಚ್ಛಿಸಿದ ಪಕ್ಷದಲ್ಲಿ ನಿಯಂತ್ರಕ ಸೂಕ್ತವಾದ ಜಾಹೀರು ನೀಡಿ ಯುಕ್ತ ವಿಚಾರಣೆ ನಡೆಸಿ ಅನಂತರ ಅದನ್ನು ರದ್ದು ಪಡಿಸಬಹುದು. ಯಾವುದೇ ಏಕಸ್ವದಿಂದ ದೇಶಕ್ಕೆ ಅಥವಾ ಸಾರ್ವಜನಿಕರಿಗೆ ಅಪಚಾರವಾಗಿದೆಯೆಂದು ಪ್ರಕಟಿಸಿ ಸರ್ಕಾರ ಆ ಏಕಸ್ವವನ್ನು ರದ್ದು ಪಡಿಸಬಹುದು. 

ಯಾರಿಂದಲಾದರೂ ಏಕಸ್ವಕ್ಕೆ ಚ್ಯುತಿ ಬಂದಾಗ ಆ ಬಗ್ಗೆ ಜಿಲ್ಲಾ ನ್ಯಾಯಾಲಯದ ಮುಂದೆ ವ್ಯವಹಾರ ಮಾಡಬಹುದು. ಏಕಸ್ವನ್ನು ರದ್ದು ಮಾಡಬೇಕೆಂದು ಪ್ರತಿ ಅಭ್ಯರ್ಥನೆ ಇದ್ದಲ್ಲಿ ವ್ಯವಹಾರದ ತೀರ್ಮಾನಕ್ಕೆ ಉಚ್ಚನ್ಯಾಯಾಲಯಕ್ಕೆ ಕಳುಹಿಸಬೇಕು. ಆದರೆ ಏಕಸ್ವದ ತಿಳಿವಳಿಕೆ ಇಲ್ಲದೆ ಅಥವಾ ತಿಳಿಯಲು ಆಸ್ಪದವಿಲ್ಲದೆ ಒಬ್ಬ ಏಕಸ್ವಕ್ಕೆ ಚ್ಯುತಿ ತಂದಿದ್ದರೆ ಅವನ ಮೇಲೆ ನಷ್ಟಕ್ಕೆ ದಾವೆ ನಿಲ್ಲಲಾರದು. ಆದರೂ ನ್ಯಾಯಾಲಯದಲ್ಲಿ ತಡೆಯಾಜ್ಞೆಯ (ಇಂಜೆಕ್ಷನ್) ವ್ಯವಹಾರ ಮಾಡಲು ಯಾವ ಅಡ್ಡಿಯೂ ಇಲ್ಲ. ಈ ವ್ಯಾಜ್ಯದ ಅರ್ಜಿ ಸೂಕ್ತವೆನಿಸಿದಲ್ಲಿ ಕೋರ್ಟು ಈ ಬಗ್ಗೆ ಆದೇಶ ನೀಡುವುದಲ್ಲದೆ ಲೆಕ್ಕಪತ್ರಗಳ ಪರಿಶೀಲನೆಯೇ ಮೊದಲಾದ ನಿವೃತ್ತಿಗಳನ್ನೂ ಕೊಡಬಹುದು. ಉಚ್ಚನ್ಯಾಯಾಲಯದಲ್ಲಿ ನಡೆದ ಮೊಕದ್ದಮೆಯ ತೀರ್ಪನ್ನೂ ಅದು ನಿಯಂತ್ರಕನಿಗೆ ಕಳುಹಿಸಬೇಕು. ನಿಯಂತ್ರಕ ಈ ತೀರ್ಮಾನದ ವಿವರಗಳನ್ನು ಏಕಸ್ವ ರಿಜಿಸ್ಟರಿನಲ್ಲಿ ದಾಖಲು ಮಾಡಿಕೊಳ್ಳುತ್ತಾನೆ.

ತಾನೇ ಏಕಸ್ವ ಹಕ್ಕುದಾರನೆಂದು ಹೇಳುತ್ತಾ ಬೇರೊಬ್ಬ ಅದಕ್ಕೆ ಚ್ಯುತಿ ತಂದನೆಂದು ಆರೋಪಿಸಿ ನಷ್ಟಕ್ಕೆ ಅಥವಾ ಇತ್ಯಾದಿಗಳಿಗೆ ವ್ಯಾಜ್ಯ ಮಾಡುವುದಾಗಿ ಹೆದರಿಸಿ ಬಹಿರಂಗ ಪತ್ರ, ಜಾಹೀರಾತು ಇತ್ಯಾದಿಗಳನ್ನು ಮಾಡಿದರೆ ಅವನ ಮೇಲೆ ತೊಂದರೆಗೆ ಈಡಾದವ ಜಿಲ್ಲಾ ನ್ಯಾಯಾಲಯದಲ್ಲಿ ಸೂಕ್ತ ನಿರ್ದೇಶನಕ್ಕೂ ನಷ್ಟಕ್ಕೂ ವ್ಯಾಜ್ಯ ಹೂಡಬಹುದು.
ಏಕಸ್ವಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳು ನೀಡಿರುವ ತೀರ್ಪುಗಳಿಂದ ಕೆಲವು ವಿಚಾರಗಳು ಸಿದ್ದಪಡುತ್ತವೆ. ಹೊಸ ಆವಿಷ್ಕಾರವೆಂದರೇನು ಎಂಬುದು ಒಂದು ಮುಖ್ಯ ವಿಚಾರ. ಇನ್ನೊಬ್ಬರು ಆ ಸಮಯದ ತನಕ ಕಂಡು ಹಿಡಿಯದ ಯಾವುದನ್ನಾದರೂ ಅನೇಕ ವಿಧಾನಗಳಿಂದ ಒಬ್ಬ ಕಂಡುಹಿಡಿಯಬಹುದು. ಇದರಿಂದಾಗಿ ಇವನ ಹಿಂದಿನವ ಅರ್ಜಿ ಹಾಕಿ ಏಕಸ್ವ ಪಡೆಯಲು ತೊಂದರೆಯೇನೂ ಬರುವುದಿಲ್ಲ. ಒಂದು ಆವಿಷ್ಕಾರದ ಏಕಸ್ವವನ್ನು ಅದು ಹೊಸತಲ್ಲವೆಂಬ ಕಾರಣದಿಂದ ನಿರಾಕರಿಸುವಾಗ ಆ ಆವಿಷ್ಕಾರ ಉಪಯೋಗದಲ್ಲಿ ಇತ್ತು. ಅದು ತಿಳಿದೂ ಇತ್ತು ಎಂದು ತೋರಿಸಿಕೊಡಬೇಕಾದುದಿಲ್ಲ. ಅದರ ವರ್ಣನೆ ಒಂದು ಪುಸ್ತಕದಲ್ಲಿ ವಿವರಿಸಲಾಗಿದ್ದು ಸಾರ್ವಜನಿಕರ ಅವಗಾಹನೆಗೆ ಬಂದಿದ್ದರೆ ಆ ಆವಿಷ್ಕಾರ ತಿಳಿದಿತ್ತು ಎಂಬುದಾಗಿ ತೀರ್ಮಾನಿಸಬಹುದು. ಒಂದು ಆವಿಷ್ಕಾರದಿಂದ ಹಿಂದೆ ಗೊತ್ತಿದ್ದ ಆವಿಷ್ಕಾರದ ಸುಧಾರಣೆಯಾಗಿದ್ದರೆ ಅದು ನವೀನ ಆವಿಷ್ಕಾರ ಎನಿಸಿಕೊಳ್ಳುತ್ತದೆ. ಆವಿಷ್ಕಾರ ಮಾಡುವ ಸಲುವಾಗಿ ಒಬ್ಬ ಹಣ ಒದಗಿಸಿದ ಮಾತ್ರಕ್ಕೆ ಆತನೇ ಆವಿಷ್ಕರ್ತನಾಗಲಾರ. ಒಂದು ಸಂಸ್ಥೆ ಏಕಸ್ವ ಪಡೆಯಬಹುದಾದರೂ ಅದೇ ಆವಿಷ್ಕರ್ತವೆಂದೆನಿಸಿ ಕೊಳ್ಳಬೇಕಾದುದಿಲ್ಲ. ಏಕಸ್ವ ಪಡೆದವನೆಂದರೆ ಅದನ್ನು ಇತರರಿಂದ ಪಡೆದವನೂ ಸೇರುತ್ತಾನೆ.

ಹೊಸ ಆವಿಷ್ಕಾರದ ಗಂಧಗಾಳಿಯೂ ಇಲ್ಲದೆ ಎರಡು ಅಥವಾ ಹೆಚ್ಚು ವಸ್ತುಗಳನ್ನು ಜೋಡಿಸಿದ ಮಾತ್ರಕ್ಕೆ ನವೀನ ಆವಿಷ್ಕಾರವಾಗಲಾರದು. ಏಕಸ್ವದ ಚ್ಯುತಿಯ ವ್ಯಾಜ್ಯ ಬಂದಾಗ ಆ ಆವಿಷ್ಕಾರ ಉಪಯುಕ್ತವೇ ಅಲ್ಲವೆ ಎಂಬುದನ್ನು ನೋಡಬೇಕು. ಏಕಸ್ವದ ಸಿಂಧುತ್ವಕ್ಕೆ ಪ್ರಧಾನವಾದ ಅಂಶವೆಂದರೆ ಅದರ ನಾವೀನ್ಯ. ಏಕಸ್ವದ ಚ್ಯುತಿಗೆ ವ್ಯಾಜ್ಯವಾದಾಗ ಏಕಸ್ವದ ಸಿಂಧುತ್ವವನ್ನು ಪ್ರಶ್ನಿಸಬಹುದು. ನಷ್ಟಕ್ಕೆ ಮಾಡಿದ ದಾವೆಯಲ್ಲಿ ಏಕಸ್ವದ ತಿಳಿವಳಿಕೆಯಿರಲಿಲ್ಲ, ಅದನ್ನು ತಿಳಿದುಕೊಳ್ಳಲು ಆಸ್ಪದವಿರಲಿಲ್ಲ-ಎಂದು ಪ್ರತಿವಾದಿ ವಾದಿಸಬಹುದು. ಪ್ರತಿವಾದಿಯ ಮೇಲೆ ತಡೆಯಾಜ್ಞೆಯ ವ್ಯವಹಾರ  ಕೈಗೊಂಡಾಗ ತಾತ್ಕಾಲಿಕ (ವ್ಯಾಜ್ಯ ಮುಗಿಯುವ ತನಕ) ತಡೆಯಾಜ್ಞೆ ಕೇಳಬಹುದು. ಸೂಕ್ತವೆನಿಸಿದಾಗ ನ್ಯಾಯಾಲಯ ತಡೆಯಾಜ್ಞೆ ನೀಡಬಹುದು. (ಕೆ.ಜಿ.ಬಿ)

 ಅಂತಾರಾಷ್ಟ್ರೀಯ ಏಕಸ್ವ ಹಕ್ಕುಗಳು 
ಒಂದು ಏಕಸ್ವದ ಹಕ್ಕುಗಳ ವ್ಯಾಪ್ತಿಯಿರುವುದು ಅದನ್ನು ನೀಡುವ ದೇಶದ ಗಡಿಯೊಳಗೆ ಮಾತ್ರ. ನಾನಾ ದೇಶಗಳಲ್ಲಿ ಏಕಸ್ವ ಹಕ್ಕು ಹೊಂದಬೇಕೆಂದು ಬಂiÀÄಸುವವರು ಈಗ ದೇಶಗಳಲ್ಲಿ ಒಂದೊಂದರಲ್ಲೂ ಪ್ರತ್ಯೇಕವಾಗಿ ಇದನ್ನು  ಪಡೆಯುವುದವಶ್ಯ. ವಿಶ್ವವ್ಯಾಪಕವಾದ ಏಕಸ್ವ ವ್ಯವಸ್ಥೆ ಯಾವುದೂ ಇದುವರೆಗೆ ಇಲ್ಲ. ಇನ್ನೊಂದು ದೇಶದಲ್ಲಿ ನೀಡಲಾದ ಏಕಸ್ವವನ್ನು ತಮ್ಮ ದೇಶಗಳಲ್ಲೂ ನೋಂದಣಿ ಮಾಡಿಸಬಹುದೆಂದೂ ಅವು ಊರ್ಜಿತವೆಂದೂ ಕೆಲವು ದೇಶಗಳ ಕಾಯಿದೆಗಳಲ್ಲಿ ನಮೂದಿಸಲಾಗಿದೆ.

ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ಏಕಸ್ವ ಕಾಯಿದೆಗಳಿವೆ. ಇವುಗಳು ಸ್ಥೂಲವಾಗಿ ಒಂದೇ ಬಗೆಯವು. ಏಕಸ್ವದ ವಸ್ತುವಿನ ವ್ಯಾಖ್ಯೆ. ಆವಿಷ್ಕಾರದ ಹೊಸತನ ಕಳೆದು ಹೋಗುವ ಸಂದರ್ಭ, ಏಕಸ್ವದ ಅವಧಿ. ಏಕಸ್ವ ಪಡೆಯುವ ವಿಧಾನ-ಮುಂತಾದ ವಿಚಾರಗಳಲ್ಲಿ ಮಾತ್ರ ವ್ಯತ್ಯಾಸಗಳಿವೆ. ಸೋವಿಯತ್ ಒಕ್ಕೂಟದಲ್ಲೂ ಏಕಸ್ವ ಪಡೆಯಲು ಅವಕಾಶವುಂಟು. ಆದರೆ ಇದು ವಿರಳ. ಅಲ್ಲಿ ಲೇಖಕನ ಮತ್ತು ಆವಿಷ್ಕರ್ತನ ಹಕ್ಕು ಪತ್ರಗಳನ್ನು ಕೊಡುವುದುಂಟು. ಈ ಸಂದರ್ಭಗಳಲ್ಲಿ ಆವಿಷ್ಕರ್ತನಿಗೆ ಪರಿಹಾರಧನ ನೀಡಲಾಗುವುದೇ ವಿನಾ ಆತನಿಗೆ ಸಂಪುರ್ಣ ಹಕ್ಕು ದೊರಕುವುದಿಲ್ಲ.

ವಿಶ್ವದ ಏಕಸ್ವ ಕಾಯಿದೆಗಳ ಸಾರಾಂಶಗಳನ್ನು ಸಂಗ್ರಹಿಸಿ ಪ್ರಕಟಿಸಬೇಕೆಂಬುದು ನಾನಾ ದೇಶಗಳ ಆವಿಷ್ಕರ್ತರ ಹಾಗೂ ಶಾಸಕರ ದೀರ್ಘಕಾಲದ ಬಂiÀÄಕೆಯಾಗಿತ್ತು. 1851ರಷ್ಟು ಹಿಂದೆಯೇ ಏಕಸ್ವಧಾರಿಗಳ (ಪೇಟೆಂಟೀಸ್) ಸಂಘವೊಂದು ಈ ಬಗ್ಗೆ ಸಲಹೆ ಮಾಡಿತ್ತು. ಆವಿಷ್ಕರ್ತರ ಪರಸ್ಪರ ಹಕ್ಕುಗಳ ಪುರಸ್ಕಾರಕ್ಕಾಗಿ ಅಂತಾರಾಷ್ಟ್ರೀಯ ಒಡಂಬಡಿಕೆಯಾಗಬೇಕೆಂಬುದೂ ಅದರ ಇಚ್ಛೆಯಾಗಿತ್ತು. 1873ರಲ್ಲಿ ವಿಯೆನ್ನದಲ್ಲೂ 1878ರಲ್ಲಿ ಪ್ಯಾರಿಸ್ಸಿನಲ್ಲೂ ಸೇರಿದ್ದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಈ ಅಭಿಪ್ರಾಯಕ್ಕೆ ಪುಷ್ಟಿ 
ದೊರಕಿತು. ಕೈಗಾರಿಕಾ ಸ್ವಾಮ್ಯದ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಒಡಂಬಡಿಕೆ ಯೊಂದಕ್ಕೆ ಸಹಿಯಾದ್ದು 1883ರ ಮಾರ್ಚ್ 20 ರಂದು ಪ್ಯಾರಿಸ್ಸಿನಲ್ಲಿ. ಈ ಒಡಂಬಡಿಕೆ ಯಿಂದ ಒಂದು ದೇಶದಲ್ಲಿ ಏಕಸ್ವ ಪಡೆದವನು ಇನ್ನೊಂದು ದೇಶದಲ್ಲೂ ಪಡೆಯಲು ಕೆಲವು ಅನುಕೂಲಗಳು ಲಭಿಸಿದುವು.	      *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ